ಬ್ಲಾಕ್, ಕೊನ್ರಾಡ್ ಎಮಿಲ್
	1912. ಅಮೆರಿಕದಲ್ಲಿ ನೆಲಸಿರುವ ಜರ್ಮನ್ ಜೀವರಸಾಯನವಿಜ್ಞಾನಿ. ಕೊಲೆಸ್ಟಿರಾಲಿನ ಜೈವಿಕ ಸಂಶ್ಲೇಷಣೆಯ ವಿವರಣೆಗಾಗಿ 1964ರಲ್ಲಿ ಲೆನೆನ್ ಎಂಬ ಇನ್ನೊಬ್ಬ ಜೀವರಸಾಯನ ವಿಜ್ಞಾನಿಯೊಡನೆ ನೊಬೆಲ್ ಪಾರಿತೋಷಿಕ ದೊರೆಯಿತು. ಬ್ಲಾಕ್ 1912 ಜನವರಿ 21ರಂದು, ಆಗ ಜರ್ಮನಿಗೆ ಸೇರಿದ್ದು ಈಗ ಪೋಲೆಂಡಿನಲ್ಲಿ ಇರುವ, ನೆಯ್ಸ್, ಎಂಬ ಪಟ್ಟಣದಲ್ಲಿ ಜನಿಸಿದ. ಮ್ಯೂನಿಕ್ಕಿನ ಟಕ್ನಿಕಲ್ ಹೈಸ್ಕೂಲಿನಲ್ಲಿ ವ್ಯಾಸಂಗಮಾಡಿ 1934ರಲ್ಲಿ ಕೆಮಿಕಲ್ ಎಂಜಿನಿಯರಿಂಗನಲ್ಲಿ ಪದವಿಗಳಿಸಿದ. ಜರ್ಮನಿಯಲ್ಲಿ ಹಿಟ್ಲರನ ಪ್ರಾಬಲ್ಯ ಪ್ರಾರಂಭವಾದಾಗ ಸ್ವಿಟ್ಸರ್ಲೆಂಡಿಗೆ ವಲಸೆಹೋದ. ಅನಂತರ 1936ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ತೆರಳಿ ಅಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಡಿಗ್ರಿ ಪಡೆದ (1938). ಕೊಡಲೇ ರೊಡಾಲ್ಭ್ ಶೊಎನ್ ಹೈಮರನ ಕೈ ಕೆಳಗೆ ಅನ್ವೇಷಣ ಸಹಾಯಕನಾಗಿ ಸೇರಿ ಸಮಸ್ಥಾನಿ ವಿಧಾನರೀತ್ಯ ಕೋಶಗಳ ರಾಸಾಯನಿಕ ವಿನ್ಯಾಸ ವ್ಯಾಸಂಗಿಸುವುದರಲ್ಲಿ ನಿರತನಾದ. 1946-54 ಅವಧಿಯಲ್ಲಿ ಷಿಕಾಗೋ ವಿಶ್ವವಿದ್ಯಾಲಯದಲ್ಲಿಯೂ 1954ರಿಂದ ಮುಂದೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿಯೂ ಕೋಶರಾಸಾಯನಿಕ ವಿನ್ಯಾಸ ವ್ಯಾಸಂಗ ಮುಂದುವರಿಸಿದ.

	ದೇಹದಲ್ಲಿ ಆಹಾರವಸ್ತುಗಳ ಅಪಚಯ ಕ್ರಿಯೆಯ ಅಂತ್ಯದಲ್ಲಿ ಉತ್ತತ್ತಿ ಆಗುವ ಅಸಿಟೇಟ್ ಎಂಬ ದ್ವೈಕಾರ್ಬನಿಕ ಘಟಕ (ಟೂಕಾರ್ಬನ್ ಫ್ರಾಗ್‍ಮೆಂಟ್) ಕೊಲೆಸ್ಟಿರಾಲಿನ ಅಣುಸಂಶ್ಲೇಷಣೆಯ ಸುಮಾರು 30 ಘಟ್ಟಗಳಲ್ಲಿ ಪಾಲುಗೊಳ್ಳುವ ಮುಖ್ಯ ಕಚ್ಚಾವಸ್ತು ಎಂಬುದನ್ನು ಬ್ಲಾಕ್ ಮತ್ತು ರಿಟ್ಟನ್‍ಬರ್ಗ್ 1942ರಲ್ಲಿ ತೋರಿಸಿದ್ದರು. ದ್ವೈಕಾರ್ಬನಿಕ ಘಟಕಗಳು ಹಂತಹಂತವಾಗಿ ಒಟ್ಟು 36 ಹಂತಗಳಲ್ಲಿ ಸ್ಕ್ವಾಲೀನ್ ಎಂಬುದು ಅತಿ ಮುಖ್ಯ ಹಂತವೆಂದೂ ಇದೇರೀತಿ ದೇಹದಲ್ಲಿ ದ್ವೈಕಾರ್ಬನಿಕ ಫಟಕಗಳ ಹಂತಹಂತವಾದ ಸೇರ್ಪಡೆಯಿಂದ ದೇಹದ ಮೇದೋಆಮ್ಲಗಳ (ಫ್ಯಾಟಿ ಆಸಿಡ್ಸ್) ಸಂಯೋಜನೆ ಆಗುವುದೆಂದೂ ಬ್ಲಾಕ್ ಮತ್ತು ಲೆನೆನ್ ವಿಶದೀಕರಿಸಿದರು. ದೇಹದಲ್ಲಿ ಕೊಲೆಸ್ಟಿರಾಲಿನ ಸಂಯೋಜನೆಯ ವಿವರ ತಿಳಿದು ಬಂದ ಬಳಿಕ ರಕ್ತದಲ್ಲಿ ಅದರ ಮಟ್ಟದ ಏರಿಳಿತಗಳ ವಿವರಗಳೂ ಅವಕ್ಕೂ ಅಧಿರೋಸ್ಕ್ಲೀರೋಸಿಸ್ (ಅಧಿರೋಮ) ರೋಗಸ್ಥಿತಿಗೂ ಇರುವ ಸಂಬಂಧ ಸ್ಪಷ್ಟವಾಯಿತು. 
											(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ